
ದಾವಣಗೆರೆ, ಆ. 3: ಬಿಳಿಚೋಡು ಹೋಬಳಿ (ದಾವಣಗೆರೆ ಜಿಲ್ಲೆ) ಹಾಗೂ ಆರಸಿಕೆರೆ ಹೋಬಳಿ (ವಿಜಯನಗರ ಜಿಲ್ಲೆ) ವ್ಯಾಪ್ತಿಯ ಸುಮಾರು 100 ರಿಂದ 150 ರೈತರು ತನಿಖೆ ವಿಳಂಬ, ರೈತರ ಹಣ ದುರುಪಯೋಗ ಹಾಗೂ ದೂರುದಾರರಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಸೋಮವಾರ ದಾವಣಗೆರೆಯಲ್ಲಿ ಬೃಹತ್ ಪಾದಯಾತ್ರೆ ನಡೆಸಿದರು.
ಬೆಳಿಗ್ಗೆ 11 ಗಂಟೆಗೆ ಜಯದೇವ ವೃತ್ತದಿಂದ ಆರಂಭವಾದ ಪಾದಯಾತ್ರೆಯು ಗಾಂಧಿ ವೃತ್ತ, ಜಿಲ್ಲಾ ನ್ಯಾಯಾಲಯದ ಮುಂಭಾಗದ ರಸ್ತೆ ಮೂಲಕ ಸಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿಗೆ ತಲುಪಿತು.
ರೈತರು ಪೊಲೀಸ್ ಮಹಾನಿರ್ದೇಶಕರು (ಡಿ.ಜಿ. & ಐ.ಜಿ.ಪಿ.) ನೀಡಿರುವ ನಿರ್ದೇಶನಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು, ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿ ನೊಂದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಜುಲೈ 27, 2026ರಂದು ನ್ಯಾಯ ಕೇಳಲು ಬಂದ ರೈತರೊಂದಿಗೆ ಪೊಲೀಸರು ಅಸಭ್ಯವಾಗಿ ವರ್ತಿಸಿದ್ದು, ಬಂಧಿಸುವ ಬೆದರಿಕೆ ಹಾಕಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ಈ ಸಂಬಂಧ ರೈತರು ದಾವಣಗೆರೆ ನಗರ ಉಪವಿಭಾಗಾಧಿಕಾರಿ (ಡಿವೈಎಸ್ಪಿ) ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ, ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶದಂತೆ ಕೂಡಲೇ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಶಿವಲಿಂಗಯ್ಯ ಸೇರಿದಂತೆ ಅನೇಕ ರೈತರು ಭಾಗವಹಿಸಿ, ತನಿಖೆಯನ್ನು ವಿಳಂಬ ಮಾಡದೆ ಪಾರದರ್ಶಕವಾಗಿ ನಡೆಸಿ ರೈತರ ಹಕ್ಕುಗಳನ್ನು ರಕ್ಷಿಸಬೇಕೆಂದು ಆಗ್ರಹಿಸಿದರು.
ವರದಿ: ಬಿ ನ್ಯೂಸ್ ಕನ್ನಡ ಡಿಜಿಟಲ್ ಮೀಡಿಯಾ
