
ಜೇವರ್ಗಿ : ಜೇವರ್ಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಕದಂಬ ಕಲಾ ಮತ್ತು ವಾಣಿಜ್ಯ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಕಾಶಿನಾಥ್ ವಿ. ಉಪ್ಪಾರ ಉದ್ಘಾಟಿಸಿ ಮಾತನಾಡಿ, ಮಾನವ ಕಳ್ಳಸಾಗಣೆ ತಡೆ, ಪೋಕ್ಸೋ (POCSO) ಕಾಯ್ದೆಯ ಮಹತ್ವ ಹಾಗೂ ಅಪರಾಧ ಸಾಬೀತಾದರೆ ವಿಧಿಸಲಾಗುವ ಶಿಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಯುವಕರು ಹಾಗೂ ವಿದ್ಯಾರ್ಥಿಗಳು ಕಾನೂನು ಅರಿವು ಹೊಂದಿ ಜಾಗೃತ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಾಂತರಾಜ ಪಾಟೀಲ ನರಿಬೋಳ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ಕಾನೂನು ಅಥವಾ ಸಾಮಾಜಿಕ ಸಮಸ್ಯೆ ಎದುರಾದರೆ ವಕೀಲರ ಸಂಘದಿಂದ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಭಾಷಾಪಟೇಲ್ ಎಸ್. ಮಾಲಿಪಟೇಲ್ (ಯಾಳವಾರ) ಮಾತನಾಡಿ, ಬಾಲ ಅಪರಾಧ ಕಾನೂನು, ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡುವುದು ಕಾನೂನುಬಾಹಿರ ಎಂಬ ವಿಷಯಗಳ ಕುರಿತು ಅರಿವು ಮೂಡಿಸಿದರು. ಶಿಕ್ಷಣದ ಹಕ್ಕು, ವಿದ್ಯಾರ್ಥಿಗಳ ಜವಾಬ್ದಾರಿ ಹಾಗೂ ಕಾನೂನು ಪಾಲನೆಯ ಅಗತ್ಯವನ್ನು ವಿವರಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ರಾಜಶೇಖರ ಶಿಲ್ಪಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಯ ಕನಸನ್ನು ನನಸು ಮಾಡಬೇಕು ಎಂದು ಕರೆ ನೀಡಿದರು.
ಹಿರಿಯ ವಕೀಲ ಮಲ್ಲಿಕಾರ್ಜುನ ಡಿ. ಮ್ಯಾಳಗಿ ಸ್ವಾಗತ ಭಾಷಣ ಮಾಡಿದರು. ಹಿರಿಯ ವಕೀಲ ಡಿ.ಎಫ್. ಕೊಂಡಗೋಳಿ, ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ ಕೂಳಗೇರಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೇಶದ ಆದರ್ಶ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕ ಪರಶುರಾಮ ಮಂದವಾಳ ಮಾನವ ಕಳ್ಳಸಾಗಣೆ ತಡೆ ಕಾಯ್ದೆ, ನೈತಿಕ ಮೌಲ್ಯಗಳು ಹಾಗೂ ಜೀವನದಲ್ಲಿ ಕಾನೂನು ಅರಿವಿನ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಶೈಲ ಕೆ. ಖಣದಾಳ ವಹಿಸಿದ್ದರು. ಆರ್.ಬಿ. ಬಂಡಾರಿ, ಹುಣಚಿರಾಯ ನಾಟೀಕಾರ, ಉಪನ್ಯಾಸಕ ಸೋಮಣ್ಣ ಯಾಳವಾರ, ಬಸಪ್ಪ ಹಾಳಗಡ್ಲ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವರದಿ: ಮಕ್ತುಮ್ ಪಟೇಲ್ ಹಿಪ್ಪರಗ ಎಸ್.ಎ
