
ಐಮಂಗಲ : ಶ್ರಾವಣ ಮಾಸದ ಎರಡನೇ ದಿನದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಹಾಗೂ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಬಸವ ನಾಗಿದೇವ ಮಹಾಸ್ವಾಮೀಜಿಯವರು, ಮೌಢ್ಯತೆಯಿಂದ ಮನುಷ್ಯನ ಜೀವನ ನರಕದರ್ಶನ ಪಡೆಯುತ್ತದೆ. ವೈಚಾರಿಕತೆಯು ಜೀವನದಲ್ಲಿನ ಹಲವು ಸಮಸ್ಯೆಗಳಿಂದ ದೂರ ಮಾಡುತ್ತದೆ ಎಂದು ಹೇಳಿದರು.
ವೈಚಾರಿಕ ಚಿಂತನೆಯು ಮನುಷ್ಯನನ್ನು ಜೀವನದ ಗುರಿ ಹಾಗೂ ಗುರುವಿನ ಕಡೆಗೆ ಕರೆದೊಯ್ಯುತ್ತದೆ. ಗುರುವು ಸಂಸ್ಕಾರ ನೀಡಿ, ಸಂಸ್ಕೃತಿಯನ್ನು ಕಲಿಸುವ ಮೂಲಕ ಉತ್ತಮ ಬದುಕಿಗೆ ದಾರಿ ತೋರಿಸುತ್ತಾನೆ ಎಂದು ತಿಳಿಸಿದರು.
ಕಾರ್ಯಕ್ರಮದ ಎರಡನೇ ದಿನದ ಪ್ರವಚನದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಶಿವಚಿಂತನೆ ಕುರಿತು ಮಾತನಾಡಿದ ಅವರು, ಬಾಲ್ಯದಲ್ಲಿಯೇ ಶಿವಭಕ್ತಿ ಹಾಗೂ ಶಿವಧ್ಯಾನದ ಮೂಲಕ ಶಿವಸಾಕ್ಷಾತ್ಕಾರವನ್ನು ಪಡೆದ ಶಿವಯೋಗಿ ಸಿದ್ದರಾಮೇಶ್ವರರು ಸೊನ್ನಲಾಪುರವನ್ನು ಅಭಿನವ ಶ್ರೀಶೈಲವನ್ನಾಗಿ ಮಾಡುವ ಸಂಕಲ್ಪದಿಂದ ನೂರಾರು ಶಿವಾಲಯಗಳನ್ನು ನಿರ್ಮಿಸುವ ಕಾರ್ಯ ಕೈಗೊಂಡಿದ್ದರು ಎಂದು ವಿವರಿಸಿದರು.
ಅಂತಹ ಸಂದರ್ಭದಲ್ಲಿ ವೈರಾಗ್ಯನಿಧಿ ಅಲ್ಲಮಪ್ರಭು ಸೊನ್ನಲಾಪುರಕ್ಕೆ ಆಗಮಿಸಿ ಶಿವಶರಣರ ಮಾರ್ಗವನ್ನು ತೋರಿಸಿದರು. ವಾದ–ವಿವಾದಗಳ ಮೂಲಕ ಹಾಗೂ ಭಕ್ತಿಯ ಶಕ್ತಿಯಿಂದ ಶಿವಯೋಗಿ ಸಿದ್ದರಾಮೇಶ್ವರರ ಚಿಂತನೆಗೆ ಹೊಸ ದಿಕ್ಕು ನೀಡಿದರು. ಬಳಿಕ ಕಲ್ಯಾಣಕ್ಕೆ ಆಗಮಿಸಿದ ಸಿದ್ದರಾಮೇಶ್ವರರು ಶಿವಶರಣರೊಂದಿಗೆ ಬೆರೆತು ಸತ್ಯದರ್ಶನವನ್ನು ಪಡೆದರು ಎಂದು ಹೇಳಿದರು.
“ಕಲ್ಲು ದೇವರಲ್ಲ, ಮರ ದೇವರಲ್ಲ, ಗುಂಡಿಗಳಲ್ಲಿ ಇರುವ ದೇವರೂ ದೇವರಲ್ಲ. ತನ್ನ ತಾನಾರೆಂಬುದನ್ನು ಅರಿತಾಗ ತಾನೇ ದೇವ ಎಂಬ ಸತ್ಯದ ಅರಿವು ಮೂಡುತ್ತದೆ” ಎಂಬ ತತ್ತ್ವವನ್ನು ಶಿವಯೋಗಿ ಸಿದ್ದರಾಮೇಶ್ವರರು ಅರಿತು ಆಚರಿಸಿದರು. ಅಂತಿಮವಾಗಿ ಅವರು ಶೂನ್ಯಪೀಠದ ಚಕ್ರವರ್ತಿಯಾಗಿ ಶಿವತತ್ವವನ್ನು ಸಾರಿದರು ಎಂದು ಶ್ರೀಗಳು ಪ್ರವಚನದಲ್ಲಿ ತಿಳಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀ ಬಸವ ಹರಳಯ್ಯ ಸ್ವಾಮೀಜಿಯವರು, ಭಕ್ತಿಯ ಮೂಲಕ ಭಗವಂತನನ್ನು ಕಾಣಲು ಸಾಧ್ಯ. ಮನುಷ್ಯನು ಸತ್ಕಾರ್ಯ, ಸದಾಚಾರ ಹಾಗೂ ಆಧ್ಯಾತ್ಮಿಕ ಚಿಂತನೆಯೊಂದಿಗೆ ಜೀವನ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಕಾರ್ಯಕ್ರಮದ ಬಳಿಕ ದಾಸೋಹ ವ್ಯವಸ್ಥೆ ನೆರವೇರಿಸಲಾಯಿತು.
