
ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು 10 ರಿಂದ 15 ಸಾವಿರದವರೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಜಿಲ್ಲಾ ಸರ್ಜನ್ ಡಾ. ರವೀಂದ್ರ ಅವರನ್ನು ಕೆಡಿಪಿ (ತ್ರೈಮಾಸಿಕ) ಸಭೆಗೆ ಕರೆಸಿ, ಮಾಹಿತಿ ಪಡೆದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆಸಿದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಹಣ ಪಡೆಯುವುದು, ಹಣ ಕೊಟ್ಟವರಿಗೆ ಮಾತ್ರ ತುರ್ತು ಚಿಕಿತ್ಸೆ ಹಾಗೂ ಬಿಪಿಎಲ್ ಕಾರ್ಡ್ ಇರುವರಿಗೆ ಎಂಆರ್ಐ ಸ್ಕ್ಯಾನಿಂಗ್ಗೆ ಆದ್ಯತೆ ನೀಡುವುದು ಅತ್ಯಂತ ಗಂಭೀರ ವಿಷಯವಾಗಿದೆ.
ಬಡವರ ಆರೋಗ್ಯದೊಂದಿಗೆ ಚೆಲ್ಲಾಟ ನಡೆಸುವುದನ್ನ ನಾನು ಸಹಿಸುವುದಿಲ್ಲ. ಬಡವರಿಗೆ ಸೇವೆ ಮಾಡಬೇಕೆನ್ನುವ ಮನೋಭಾವನೆಯನ್ನ ಜಿಲ್ಲಾ ಸರ್ಜನ್ ವೃತ್ತಿಯಲ್ಲಿರುವವರು ಬೆಳೆಸಿಕೊಳ್ಳಬೇಕು. ವೈದ್ಯಾಧಿಕಾರಿಗಳೇ ನಿಮ್ಮ ಮಾತನ ಕೇಳುವುದಿಲ್ಲ ಎಂದರೆ ಸಾಮಾನ್ಯರ ಜನರ ಗತಿ ಏನು? ಎಂದು ಜಿಲ್ಲಾ ಸರ್ಜನ್ ವೈದ್ಯಾಧಿಕಾರಿ ಡಾ.ರವೀಂದ್ರ ಅವರಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಮಹಿಳೆಯರನ್ನು ಎರಡರಿಂದ ಮೂರು ದಿನಗಳವರೆಗೆ ಕಾಯಿಸಿ, ಹಣ ನೀಡಿದ ನಂತರವೇ ಹೆರಿಗೆ ಮಾಡಿಸುತ್ತಾರೆ ಎಂಬ ಆರೋಪಗಳು ಜನರಿಂದ ನಮಗೆ ಕೇಳಿಬಂದಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು. ಆದರೆ ಕೆಲ ವೈದ್ಯರು ಖಾಸಗಿ ಆಸ್ಪತ್ರೆಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದು, ಬಡವರ ಸೇವೆಗೆ ಆದ್ಯತೆ ನೀಡುತ್ತಿಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸಿದರು.
ವರದಿ : ಶ್ರೇಯಸ್ ಎಸ್
